BPL: ಬಿಪಿಎಲ್ ಕಾರ್ಡ್ ಕೈತಪ್ಪಿದವರಿಗೆ ಭರ್ಜರಿ ಸಿಹಿ ಸುದ್ದಿ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಯಾವಾಗ?

BPL: ಬಿಪಿಎಲ್ ಕಾರ್ಡ್ ಕೈತಪ್ಪಿದವರಿಗೆ ಭರ್ಜರಿ ಸಿಹಿ ಸುದ್ದಿ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಯಾವಾಗ?

ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ: ಮರುಪಡೆಯಲು ಇದ್ದ 45 ದಿನಗಳ ಗಡುವು ರದ್ದು

ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ (BPL) ಪಡಿತರ ಚೀಟಿ ಪಡೆದವರ ವಿರುದ್ಧ ಸರ್ಕಾರ ಕಾರ್ಯಾಚರಣೆ ನಡೆಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಆದರೆ, ಈ ಪ್ರಕ್ರಿಯೆಯ ವೇಳೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಕೆಲವು ಅರ್ಹ ಬಡ ಕುಟುಂಬಗಳ ಕಾರ್ಡ್‌ಗಳು ಕೂಡ ರದ್ದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಇದೀಗ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದು, ರದ್ದಾದ ಕಾರ್ಡ್‌ಗಳನ್ನು ಮರುಪಡೆಯಲು ಇದ್ದ ಕಠಿಣ ನಿಯಮಗಳನ್ನು ಸಡಿಲಿಸಿದೆ.

4 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಆಗಿ ವರ್ಗಾವಣೆ

ಆಹಾರ ಇಲಾಖೆಯು ನಡೆಸಿದ ಕೂಲಂಕಷ ಪರಿಶೀಲನೆಯಲ್ಲಿ ರಾಜ್ಯಾದ್ಯಂತ ಒಟ್ಟು 1387651 ಪಡಿತರ ಚೀಟಿಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿತ್ತು. ಇದರ ಆಧಾರದ ಮೇಲೆ, ಪ್ರಾಥಮಿಕ ಹಂತದಲ್ಲಿಯೇ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್ (APL) ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿತ್ತು. ಇದರಿಂದ ನಿಜವಾದ ಬಡ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ಹಾಗೂ ರೇಷನ್ ಕೈತಪ್ಪಿದ್ದವು. ಇದನ್ನು ಮನಗಂಡಿರುವ ಸರ್ಕಾರ, ಯಾವುದೇ ಬಡ ಕುಟುಂಬಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಬಿಪಿಎಲ್ ಕಾರ್ಡ್‌ಗಳನ್ನು ಮರುಸ್ಥಾಪಿಸಲು ಈ ಹಿಂದೆ ವಿಧಿಸಲಾಗಿದ್ದ 45 ದಿನಗಳ ಕಠಿಣ ಗಡುವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಹೀಗಾಗಿ ಅರ್ಹ ಕುಟುಂಬಗಳು ಯಾವುದೇ ಆತಂಕವಿಲ್ಲದೆ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ.

BPL

ಬಿಪಿಎಲ್ ಕಾರ್ಡ್ ಮರುಪಡೆಯಲು ಇರುವ ಪ್ರಮುಖ ಷರತ್ತುಗಳು

ನೀವು ಬಿಪಿಎಲ್ ಕಾರ್ಡ್‌ಗೆ ಅರ್ಹರಾಗಬೇಕಾದರೆ ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು:

ಆದಾಯ ಮಿತಿ: ನಿಮ್ಮ ಕುಟುಂಬದ ವಾರ್ಷಿಕ ಒಟ್ಟು ಆದಾಯ 1.20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರಬಾರದು.

ತೆರಿಗೆ ಪಾವತಿ: ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ (Income Tax) ಪಾವತಿದಾರರಾಗಿರಬಾರದು.

ಭೂಮಿಯ ಮಿತಿ: ಅರ್ಜಿದಾರರ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ 7 ಎಕರೆಗಿಂತ ಹೆಚ್ಚಿನ ಕೃಷಿ ಜಮೀನು ಇರಬಾರದು.

ರದ್ದಾದ ಕಾರ್ಡ್ ಮರುಪಡೆಯುವ ಸುಲಭ ಪ್ರಕ್ರಿಯೆ

ಮೇಲಿನ ಎಲ್ಲಾ ಷರತ್ತುಗಳನ್ನು ನೀವು ಪೂರೈಸುತ್ತಿದ್ದರೆ, ನಿಮ್ಮ ಆದಾಯ ಪ್ರಮಾಣಪತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸಿದ ನಂತರ, ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ನಿಮ್ಮ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ಮರುಪರಿಶೀಲನೆ ನಡೆಸುತ್ತದೆ. ನಿಮ್ಮ ದಾಖಲೆಗಳು ಸರಿಯಾಗಿದ್ದು, ನೀವು ಅರ್ಹರು ಎಂದು ದೃಢಪಟ್ಟ ತಕ್ಷಣವೇ, ಬಿಪಿಎಲ್ ಕಾರ್ಡ್ ಮರುಸಕ್ರಿಯಗೊಳಿಸಲು ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅಧಿಕೃತ ಸೂಚನೆ ನೀಡಲಾಗುತ್ತದೆ.

ಹೊಸ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭ ಯಾವಾಗ?

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆ ಆಗಿಲ್ಲ. ಪ್ರಸ್ತುತ ರಾಜ್ಯದಲ್ಲಿ ಹೊಸ ಕಾರ್ಡ್‌ಗಾಗಿ ಸಲ್ಲಿಕೆಯಾಗಿರುವ ಸುಮಾರು 2.90 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಆದರೆ, ಸರ್ಕಾರದ ಮೊದಲ ಆದ್ಯತೆಯು ಈಗ ರದ್ದಾಗಿರುವ ಅರ್ಹ ಕುಟುಂಬಗಳ ಕಾರ್ಡ್‌ಗಳನ್ನು ಸರಿಪಡಿಸುವುದಾಗಿದೆ. ಈ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕವಷ್ಟೇ ಹೊಸ ಕಾರ್ಡ್‌ಗಳ ವಿಲೇವಾರಿ ಹಾಗೂ ವಿತರಣಾ ಕಾರ್ಯ ಆರಂಭವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಗಮನಿಸಿ: ಸತತ 6 ತಿಂಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳನ್ನು ಪಡೆಯದೆ ಇರುವ ಬಿಪಿಎಲ್ ಕಾರ್ಡ್‌ಗಳನ್ನು ಸ್ವಯಂಚಾಲಿತವಾಗಿ ಅಮಾನತುಗೊಳಿಸುವ ಪ್ರಕ್ರಿಯೆ ಎಂದಿನಂತೆ ಮುಂದುವರಿಯಲಿದೆ. ಆದ್ದರಿಂದ ಅರ್ಹ ಫಲಾನುಭವಿಗಳು ನಿಯಮಿತವಾಗಿ ಪಡಿತರ ಪಡೆಯುವುದು ಕಡ್ಡಾಯವಾಗಿದೆ.

 

Leave a Comment